Dr. T.M.A. Pai Foundation, Manipal

ಕಾನೂನು ಕಾಲೇಜಿನಲ್ಲಿ ಸಂಭ್ರಮದ “ಸಾಂಪ್ರದಾಯಿಕ ದಿನಾಚರಣೆ”

ಉಡುಪಿ: ಮೇ. 5. ಇಲ್ಲಿನ ಪ್ರತಿಷ್ಟಿತ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಇಂದು ಸಾಂಪ್ರದಾಯಿಕ ದಿನವನ್ನು ಆಚರಿಸಲಾಯಿತು.

ಕಾರ್ಯಕ್ರಮವನ್ನು ಕಳಸಿಗೆಗೆ ಭತ್ತವನ್ನು ಸುರಿದು ಸಿಂಗಾರದ ಹೂವನ್ನು ಬಿಡಿಸಿ ಉದ್ಘಾಟಿಸಿದ ಹಾಗೂ ಕಾಲೇಜಿನಿಂದ ಸನ್ಮಾನಿತರಾದ ಇದೇ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಹಾಗೂ ಉಡುಪಿ ನಗರ ಸಭೆಯ ಉಪಾಧ್ಯಕ್ಷೆ ಶ್ರೀಮತಿ ಸಂಧ್ಯಾ ಕುಮಾರಿಯವರು ತಾನು ಓದಿದ ಸಂಸ್ಥೆಯಿಂದ ಸನ್ಮಾನಗೊಳ್ಳುವುದು ಅತ್ಯಂತ ರೋಮಾಂಚಕ ಕ್ಷಣವಾಗಿದ್ದು, ತಮ್ಮ ಸಾಧನೆಯ ಹಿಂದೆ ಈ ಕಾಲೇಜಿನ ಪಾತ್ರ ಬಹು ದೊಡ್ಡದು ಎಂದರು. ಇಂದು ನಗರೀಕರಣದಿಂದಾಗಿ ನಾವು ನಮ್ಮ ಪರಂಪರಾನುಗತ ಸಂಪ್ರದಾಯಗಳಿಂದ ದೂರವಾಗುತ್ತಿದ್ದು ನಮ್ಮಲ್ಲಿ ನಮ್ಮ ಭವ್ಯ ಪರಂಪರೆಯ ಬಗ್ಗೆ ಅರಿವು ಮೂಡಿ ಅದನ್ನು ರಕ್ಷಿಸಲು ಇಂತಹ ಕಾರ್ಯಕ್ರಮಗಳು ನೆರವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು. ಕಾರ್ಯಕ್ರಮದ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪೆÇ್ರ.ಪ್ರಕಾಶ್ ಕಣಿವೆಯವರು ಪ್ರತಿಯೊಂದು ಸಮಾಜಕ್ಕೂ ಅದರದೇ ಆದ ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ ಇತ್ಯಾದಿ ಪರಂಪರೆಗಳಿದ್ದು, ಅವುಗಳ ರಕ್ಷಣೆ ನಮ್ಮ ನಿಮ್ಮೆಲ್ಲರ ಹೊಣೆಯಾಗಿದೆ. ಕೋಳಿ ಅಂಕ ಕಂಬಳದಂತ ಪಾರಂಪರಿಕ ಕ್ರೀಡೆಗಳು ಪ್ರಾಣಿ ದಯಾ ಸಂಘದವರ ತಕರಾರುಗಳಿಂದಾಗಿ ಕಾನೂನು ಬಾಹಿರವೆಂದು ಪರಿಗಣಿತವಾಗಿದ್ದರೂ ಇವು ಜನರ ನಡುವೆ ಹುಟ್ಟಿ ಬೆಳೆದ ಕ್ರೀಡೆಗಳಾಗಿ ಸಮಾಜದ ಕ್ರೀಡಾ ಮನೋಲ್ಲಾಸದ ಭಾಗವೇ ಆಗಿದೆ ಎಂದು ಅಭಿಪ್ರಾಯ ಪಟ್ಟರು.

ವಿದ್ಯಾರ್ಥಿ ಕ್ಷೇಮಾಧಿಕಾರಿ ಶ್ರೀ.ರೋಹಿತ್ ಎಸ್.ಅಮೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಪ್ರಸಾದಿ ಎಸ್.ಸುವರ್ಣ ಸ್ವಾಗತಿಸಿದರು. ವಿದ್ಯಾರ್ಥಿ ಅಪ್ಶಾನ್ ಅಬ್ದುಲ್ಲ ಮೊಹಮ್ಮದ್ ವಂದನಾರ್ಪಣೆ ಗೈದರು. ನಿಶ್ಮಿತಾ ಸನಿಲ್ ಕಾರ್ಯಕ್ರಮ ನಿರ್ವಹಿಸಿದರು. ಸಾಂಪ್ರದಾಯಿಕ ದಿನಾಚರಣೆಯ ನಿಮಿತ್ತ ವಿದ್ಯಾರ್ಥಿಗಳೆಲ್ಲರೂ ಸಾಂಪ್ರದಾಯಿಕ ಉಡುಪುಗಳಾದ ಸೀರೆ, ಪಂಚೆಯನ್ನು ತೊಟ್ಟಿದ್ದರಲ್ಲದೇ ಹಗ್ಗ ಜಗ್ಗಾಟ, ಅಕ್ಕಿ ಮುಡಿ ಹೊತ್ತು ಓಡುವುದು, ಅಗ್ನಿ ರಹಿತ ಅಡುಗೆ ತಯಾರಿ, ಇತ್ಯಾದಿ ಸ್ಪರ್ಧೆಗಳನ್ನು ಆಯೋಜಿಸಿದ್ದರು.